ಅಸೆಂಟ್ ಆಫ್ ಎಫ್ 6, ದಿ
ಇಂಗ್ಲಿಷ್ ನಾಟಕಕಾರರಾದ ಡಬ್ಲ್ಯು. ಎಚ್. ಆಡೆನ್ ಮತ್ತು ಸಿ. ಇಷರ್‍ವುಡ್ ಬರೆದ ಖ್ಯಾತ ಪ್ರತೀಕನಾಟಕ. ಇಂಗ್ಲೆಂಡಿಗೆ ಸೇರಿದ ವಸಾಹತು ಸೂಡೋಲ್ಯಾಂಡಿನ ಗಡಿಯಲ್ಲಿನ ಬೆಟ್ಟಸಾಲಿನ ಅತಿ ಎತ್ತರದ ಶಿಖರ ಎಫ್ 6 ಅನ್ನು ಹತ್ತಿದವರಿಗೆ ಸುತ್ತುಮುತ್ತಲಿನ ಪ್ರದೇಶವೆಲ್ಲ ದೊರಕುವುದೆಂಬುದು ನಂಬಿಕೆ. ಇದನ್ನು ಹತ್ತಲು ಇಂಗ್ಲೆಂಡಿನವರಿಗೂ ಆಸ್‍ಟ್ನಿಯಾದವರಿಗೂ (ಕಲ್ಪಿತ ಹೆಸರು) ಸ್ಪರ್ಧೆ. ಮೈಕಲ್ ರ್ಯಾನ್‍ಸಮ್ ಎನ್ನುವ ಸಾಹಸಿಗ ಈ ಕಾರ್ಯವನ್ನು ಕೈಗೊಳ್ಳುವ ಮನಸ್ಸಿಲ್ಲ. ಅವನ ಸೋದರ ಜೇಮ್ಸ್, ನಾಡಿನ ಮಹಿಳೆಯರ ಪರವಾಗಿ ಇಸಬೆಲ್, ಅವನ ತಾಯಿ ಎಲ್ಲರೂ ಇದನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತಾರೆ. ಅವನೂ ನಾಲ್ವರು ಜೊತೆಗಾರರೂ ಈ ಸಾಹಸವನ್ನು ಕೈಗೊಳ್ಳುತ್ತಾರೆ. ಜೊತೆಯವರಲ್ಲಿ ಮೂವರು ಸಾಯುತ್ತಾರೆ. ಆಸ್‍ಟ್ನಿಯಾದವರಿಗಿಂತ ಮೊದಲೆ ರ್ಯಾನಸಮ್ ಶಿಖರದ ಮೇಲೆ ಕಾಲಿಡುತ್ತಾನೆ. ನಾಡೆಲ್ಲ ಸಂಭ್ರಮಪಡುತ್ತಿರುವಾಗಲೆ ಶಿಖರದ ಕೋಡುಬಂಡೆಯ ಮೇಲೆ ಸತ್ತುಬೀಳುತ್ತಾನೆ. ಶಿಖರದ ಅಸೆಂಟ್-ಏರುವಿಕೆ-ಒಂದು ಬಗೆಯ ಅನ್ವೇಷಣೆ. ರ್ಯಾನ್‍ಸಮ್‍ಗೆ ಕಡೆಯಗಳಿಗೆಯಲ್ಲಿ ಈ ಅನ್ವೇಷಣೆಯ ಫಲ-ಆತ್ಮಜ್ಞಾನ-ದೊರೆಯುತ್ತದೆ. ಹಲವು ಆಹುತಿಗಳನ್ನು ತೆಗೆದುಕೊಂಡ ಭೂತವು ಸ್ವಾಭಿಮಾನ ಎನ್ನುವುದರ ಅರಿವಾಗುತ್ತದೆ. ಶಿಖರದ ಆರೋಹಣವು ಆತ್ಮಸಂಯಮದ ಸಂಕೇತ. ಅಧಿಕಾರದ ಹಂಬಲ, ಅಂತಾರಾಷ್ಟ್ರೀಯ ಪರಿಸ್ಥಿತಿ ಎಲ್ಲವೂ ಈ ಪ್ರಯತ್ನಕ್ಕೆ ಕಾರಣ. ಈ ಯಾತ್ರೆಯು ಸುಪ್ತ ಪ್ರಜ್ಞೆಯೊಳಕ್ಕೆ ಪ್ರಯಾಣವೂ ಆಗುತ್ತದೆ. ರಂಗಭೂಮಿಯ ಅಕ್ಕಪಕ್ಕದಲ್ಲಿರುವವನಿಗೆ ಆಕಾಶವಾಣಿಯು ಏನು ನಡೆಯುತ್ತಿದೆ ಎನ್ನುವುದನ್ನು ಬಿತ್ತರಮಾಡುತ್ತದೆ. ನಾಯಕನು ಉದ್ಧಾರಕನಾಗಿ ಬಲಿದಾನ ಮಾಡುತ್ತಾನೆ. ಕೃತಿಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಅರ್ಥಗಳೂ ಧ್ವನಿತವಾಗುತ್ತವೆ. `ಎ' ದಂಪತಿಗಳ ಚಿತ್ರ ಆಧುನಿಕ ನಾಗರಿಕಜೀವನ, ಆಡಳಿತವ್ಯವಸ್ಥೆ ಇವು ಜನಸಾಮಾನ್ಯಕ್ಕೆ ತಂದಿತ್ತ ಬರಡುಜೀವನವನ್ನು ಪ್ರತಿಬಿಂಬಿಸುತ್ತದೆ.
(ಎಲ್.ಎಸ್.ಎಸ್.)
(ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ